ಡಿಸ್ನಿ, ವಾಲ್ಟ್
ಅಮೆರಿಕದ ಪ್ರಸಿದ್ಧ ಕಾರ್ಟೂನ್ ಚಲನಚಿತ್ರ ನಿರ್ಮಾಪಕ. ಜಗತ್‍ಪ್ರಸಿದ್ಧ ಮಿಕ್ಕಿ ಮೌಸ್, ಡೋನಾಲ್ಡ್ ಡಕ್ ಮೊದಲಾದವುಗಳ ಕರ್ತೃ. ಸಹಸ್ರಾರು ಪ್ರೇಕ್ಷಕರನ್ನು ಆಕರ್ಷಿಸುತ್ತಿರುವ ಡಿಸ್ನೀಲ್ಯಾಂಡಿನ ನಿರ್ಮಾತೃ. ಬೆಳೆದದ್ದು ವಿಸೂರಿಯ ಮರ್ಸಿಲೈನ್ ವ್ಯವಸಾಯ ಭೂಮಿಯಲ್ಲಿ. ತಂದೆ ಎಲಿಯಾಸ್ ಡಿಸ್ನಿ. ತಾಯಿ ಪ್ಲೋರ. ಸಂಗಡಿಗರಿಲ್ಲದ್ದರಿಂದ ತಂದೆ ಸಾಕಿದ್ದ ಸಾಕುಪ್ರಾಣಿಗಳೊಂದಿಗೇ ಆಟವಾಡಿ ಕಾಲ ಕಳೆದ. ಚಿಕ್ಕವನಿರುವಾಗಲೇ ರೇಖಾ ಚಿತ್ರ ಮೂಡಿಸುವುದನ್ನು ಅಭ್ಯಾಸಮಾಡಿದ. ಮನೆಯ ಗೋಡೆಗಳ ಮೇಲೆಲ್ಲ ಈತ ಬಿಡಿಸಿದ ಪ್ರಾಣಿಚಿತ್ರಗಳು ತುಂಬಿರುತ್ತಿದ್ದುವು. ಚಿಕ್ಕಮ್ಮ ಮಾರ್ಗರೆಟ್ ಇವನ ಚಿತ್ರಕಲೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಬಣ್ಣಗಳ ಪೆಟ್ಟಿಗೆ, ಕುಂಚ ಇತ್ಯಾದಿ ಸಾಮಗ್ರಿ ತಂದುಕೊಟ್ಟಳು. ಇದರಿಂದ ಉತ್ತೇಜಿತನಾದ ಡಸ್ನಿ ತಮ್ಮ ಹೊಲದ ಸುತ್ತಮುತ್ತ ಕಂಡ ಪ್ರಕೃತಿ, ಪ್ರಾಣಿಗಳನ್ನು ಚಿತ್ರಿಸತೊಡಗಿದ. ತಂದೆ ಜಮೀನನ್ನು ಮಾರಿ ಕ್ಯಾನ್ಸಸ್ ನಗರಕ್ಕೆ ಹಿಂತಿರುಗಿ ವೃತ್ತಪತ್ರಿಕಾ ಹಂಚಿಕೆದಾರನಾದ. ಸೋದರಮಾವನೊಂದಿಗೆ ಡಿಸ್ನಿ ಮನೆ ಮನೆಗೆ ವೃತ್ತಪತ್ರಿಕೆಗಳನ್ನು ಹಂಚುವ ಕೆಲಸಮಾಡುತ್ತಿದ್ದ. ಬೆಳಗ್ಗೆ ಐದೂವರೆ ಗಂಟೆಗೇ ಕೆಲಸ, ಅನಂತರ ಶಾಲೆ, ಮತ್ತೆ ಸಂಜೆ ಎಂಟು ಗಂಟೆ ಶ್ರಮಪಟ್ಟು ದುಡಿಯುವುದು ಇವೆಲ್ಲ ಈತನಿಗೆ ಬಾಲ್ಯದಿಂದಲೇ ಅಭ್ಯಾಸವಾಯಿತು.

ತಮಾಷೆಯ ಸಂಭಾಷಣೆ ಬರೆದು, ಅನಂತರ ಅಣ್ಣತಮ್ಮಂದಿರಿಬ್ಬರೂ ಚಿತ್ರಮಂದಿರಗಳಲ್ಲಿ ಗಡ್ಡ ಮೀಸೆ ಕಟ್ಟಿಕೊಂಡು ತಮಾಷೆ ಸಂಭಾಷಣೆ ನಡೆಸಿ ಜನರನ್ನು ನಗಿಸುತ್ತಿದ್ದರು. ಒಮ್ಮೊಮ್ಮೆ ಇದರಿಂದ 25 ಸೆಂಟ್ ಬಹುಮಾನ ಸಿಗುತ್ತಿತ್ತು. ಅಳಿಲು, ಮೇಕೆ, ಹಂದಿ, ಹಸು, ಬೆಕ್ಕು, ಇಲಿ ಈ ಪ್ರಾಣಿಗಳೆಲ್ಲ ಇವನ ಶಾಲಾ ಪುಸ್ತಕಗಳ ಖಾಲಿ ಜಾಗಗಳನ್ನು ತುಂಬಿರುತ್ತಿದ್ದುವು. ತಂದೆ ಮತ್ತೆ 1917ರಲ್ಲಿ ಷಿಕಾಗೋ ನಗರಕ್ಕೆ ಮರಳಿದ. ಮಗ 1918ರಲ್ಲಿ ಶಾಲೆ ಬಿಟ್ಟು ಕಾರ್ಟೂನ್ ಚಿತ್ರ ಬರೆಯುವುದನ್ನು ಅಭ್ಯಾಸಮಾಡತೊಡಗಿದ. ಷಿಕಾಗೋ ಕಲಾಶಾಲೆಯಲ್ಲಿ ಇದರ ಬಗ್ಗೆ ಮಾರ್ಗದರ್ಶನ ಪಡೆದ. ಒಂದು ವರ್ಷ ಯುದ್ಧ ಸೇವೆ ಮಾಡಿ, ಕ್ಯಾನ್ಸಸ್ ನಗರಕ್ಕೆ ಬಂದು ಅಬ್ ಐವಕ್ರ್ಸ್ ಎಂಬ ಕಲಾವಿದನೊಂದಿಗೆ ಸೇರಿ ಜಾಹೀರಾತು ವ್ಯವಹಾರ ಆರಂಭಿಸಿದ. ಆರಂಭದಲ್ಲಿ 135 ಡಾಲರ್ ಸಂಪಾದನೆ ಮಾಡಿದನಾದರೂ ಕೊನೆ ಕೊನೆಗೆ ಉಪವಾಸ ಇರಬೇಕಾಯಿತು. ಇದನ್ನು ಬಿಟ್ಟು ಕ್ಯಾನ್ಸಸ್ ನಗರದ ಸ್ಲೈಡ್ ಕಂಪನಿಯಲ್ಲಿ ಸೋದರರು ಇಬ್ಬರೂ ಕೆಲಸಕ್ಕೆ ಸೇರಿ ಜಾಹೀರಾತುದಾರರಿಗಾಗಿ ಒಂದು ನಿಮಿಷ ಕಾಲದ ಕಾರ್ಟೂನ್‍ಗಳನ್ನು ತಯಾರಿಸಿತೊಡಗಿದರು. ಕಾರ್ಟೂನ್ ಪ್ರಪಂಚಕ್ಕೆ ಇದು ಡಿಸ್ನಿಯ ಪ್ರಥಮ ಪ್ರವೇಶ. ಅರ್ವಾಚೀನ ಸ್ಥಿತಿಯಲ್ಲಿದ್ದ ಕಾರ್ಟೂನ್ ಚಿತ್ರಗಳಿಗೆ ವಾಸ್ತವಿಕತೆ ತುಂಬಲು ಡಿಸ್ನಿ ಪ್ರಯತ್ನಿಸಿದ. ಇವರು ತಯಾರಿಸಿದ ಕಾರ್ಟೂನ್‍ಗಳಿಗೆ ಹೆಚ್ಚು ಪ್ರೋತ್ಸಾಹ ಸಿಕ್ಕಿತು. ತತ್ಪರಿಣಾಮವಾಗಿ ಡಿಸ್ನಿಯ ಲಾಫ್ ಓ ಗ್ರಾಮ್ ಜಾಹೀರಾತು ಸಂಸ್ಥೆ ಆರಂಭವಾಯಿತು. ಡಿಸ್ನಿ ತನ್ನ ಇಪ್ಪತ್ತನೆಯ ವಯಸ್ಸಿನಲ್ಲಿ ಲಾಫ್ ಓ ಗ್ರಾಮ್ಸ್ ಇನ್‍ಕಾರ್ಪೊರೇಷನ್ನಿನ ಅಧ್ಯಕ್ಷನಾದ. 7 ನಿಮಿಷ ಕಾಲದ ರೆಡ್ ರೈಡಿಂಗ್ ಹುಡ್ ತಯಾರಿಸಿದ. ಇದನ್ನನುಸರಿಸಿ ಪಸ್ ಇನ್ ಬೂಟ್ಸ್, ಜಾಕ್ ಅಂಡ್ ದಿ ಬೀನ್‍ಸ್ಟಾಕ್ ಕಾರ್ಟೂನುಗಳು ಹೊರಬಂದುವು. ಇವನ್ನು ಲಕ್ಷ ಲಕ್ಷ ಜನ ನೋಡಿ ಆನಂದಿಸಿದರು. ಇದೇ ಮಾಲಿಕೆಯಲ್ಲಿ ಸಿಂಡ್ರೆಲ ತೆರೆಗೆ ಬಂತು. ಕಾರ್ಟೂನ್ ತಯಾರಿಕಾ ವೆಚ್ಚ, ಹೆಚ್ಚಿ ಲಾಭ ಕಡಿಮೆಯಾಗಿ ಸಂಸ್ಥೆ ದಿವಾಳಿಯಾಯಿತು. 1923ರಲ್ಲಿ ಇವನ ಪಾಲಿಗೆ 12 ಸಾವಿರ ಡಾಲರ್ ಸಾಲ ಉಳಿದಿತ್ತು. ಹಣವಿಲ್ಲದೆ ಭೋಜನ ಗೃಹ ತ್ಯಜಿಸಿ, ಕಚೇರಿಯನ್ನೇ ಮನೆ ಮಾಡಿಕೊಳ್ಳಬೇಕಾಯಿತು. ಅಣ್ಣ ರಾಯ್ ಕ್ಷಯರೋಗ ಪೀಡಿತನಾಗಿ ಆಸ್ಪತ್ರೆ ಸೇರಿದ. ಆತ ತನಗೆ ದೊರೆಯುತ್ತಿದ್ದ 80 ಡಾಲರ್ ಸರ್ಕಾರದ ಹಣದಲ್ಲಿ 30 ಡಾಲರ್‍ಗಳನ್ನು ಡಿಸ್ನಿಗೆ ಕಳುಹಿಸುತ್ತಿದ್ದ. ಡಿಸ್ನಿ ತನ್ನ ಕಚೇರಿಯಲ್ಲಿನ ಇಲಿಗಳ ಹಾವಳಿ ತಡೆಗಟ್ಟಲು ಮಾಡಿಸಿಟ್ಟಿದ್ದ ಬೋನಿನಲ್ಲಿ ಹತ್ತು ಇಲಿಗಳನ್ನು ಹಿಡಿದು ಸಾಕಿದ. ಅದರಲ್ಲಿ ಒಂದು ಇವನಿಗೆ ತುಂಬ ಹೊಂದಿಕೊಂಡಿತು. ಅದನ್ನು ಮಾರ್ಟಿಮರ್ ಎಂದು ಕರೆದ. ಹಣಕಾಸಿನ ತೊಂದರೆ ತಪ್ಪಿಸಿಕೊಳ್ಳಲು ಚಿತ್ರ ಬರೆದು ಮನೆಮನೆಯ ಬಾಗಿಲಿಗೆ ಹೋಗಿ ಮಾರಾಟ ಮಾಡಿದ. ಆದರೂ ತೊಂದರೆ ಬಗೆಹರಿಯಲಿಲ್ಲ.

ಕ್ಯಾನ್ಸಸ್ ನಗರವನ್ನು 1923ರಲ್ಲಿ ತ್ಯಜಿಸಿ ಡಿಸ್ನಿ ಹಾಲಿವುಡ್ಡಿಗೆ ಪ್ರಯಾಣ ಮಾಡಿದ. ನಗರವನ್ನು ಸಂತೋಷವಾಗಿ ತ್ಯಜಿಸಿ ಬಂದರೂ ತನ್ನ ಪ್ರೀತಿಯ ಮಾರ್ಟಿಮರ್ ಇಲಿಯನ್ನು ಬಿಟ್ಟು ಬರುವುದು ತುಂಬ ದುಃಖದ ಸಂಗತಿಯಾಯಿತು. ಕಾನ್ಸಸ್‍ನಲ್ಲಿದ್ದಾಗಲೇ ಆ್ಯಲಿಸ್ ಇನ್ ಕಾರ್ಟೂನ್ ಲ್ಯಾಂಡ್ ಚಿತ್ರಸರಣಿಯನ್ನು ಸಿದ್ಧಪಡಿಸಿದ್ದ. ಈ ಚಿತ್ರವನ್ನು ನ್ಯೂಯಾರ್ಕಿನ ವಿಂಕ್ಲರ್ ಸಂಸ್ಥೆಗೆ ಕಳುಹಿಸಿದ. ಮೊದಲ ಆರು ಚಿತ್ರಕ್ಕೆ 1,500 ಡಾಲರುಗಳ ಬೆಲೆ ಹಾಗೂ ಉಳಿದ ಆರು ಚಿತ್ರಗಳಿಗೆ 1,800 ಡಾಲರ್ ಬೆಲೆಯ ಮೇರೆಗೆ 12 ಕಾರ್ಟೂನ್ ಚಿತ್ರಗಳನ್ನು ಕೊಳ್ಳುವುದೆಂದು ಒಪ್ಪಂದವಾಯಿತು. ಅತ್ಯಂತ ಉತ್ಸಾಹದಿಂದ ಸೋದರರಿಬ್ಬರೂ ಸಂಸ್ಥೆಯೊಂದನ್ನು ಸ್ಥಾಪಿಸಿಕೊಂಡು, ಹಂಚಿಕೆದಾರರಿಂದ ಮುಂಗಡ ಹಣ ಪಡೆದು ಕಾರ್ಟೂನ್ ತಯಾರಿಸಲಾರಂಭಿಸಿದರು. ನಿರೀಕ್ಷಿಸಿದಷ್ಟು ಬೇಗ ಚಿತ್ರಗಳು ತಯಾರಾಗಲಿಲ್ಲ. ವೆಚ್ಚ ಹೆಚ್ಚಿತು. ಹಂಚಿಕೆದಾರ ತನ್ನ ಪ್ರತಿನಿಧಿಯೊಬ್ಬನನ್ನು ಹಾಲಿವುಡ್ಡಿಗೆ ಕಳುಹಿಸಿ ಡಿಸ್ನಿಯ ಸ್ಥಿತಿ ತಿಳಿದುಬರಲು ಕಳುಹಿಸಿದ. ಆತ ಬಂದು ಡಿಸ್ನಿ ಒಬ್ಬ ಹುಚ್ಚ. ಅವನು ಉಸಿರಾಟದಲ್ಲಿ, ಊಟದಲ್ಲಿ, ನಿದ್ರೆಯಲ್ಲಿ, ಕನಸಿನಲ್ಲಿ ಕೂಡ ಕಾರ್ಟೂನುಗಳನ್ನು ಕಾಣುತ್ತಿದ್ದಾನೆ-ಎಂದು ವರದಿ ಒಪ್ಪಿಸಿದ. 

ತನ್ನ ಹಿಂದಿನ ಗೆಳೆಯ ಅಬ್ ಮತ್ತೆ ಡಿಸ್ನಿಯನ್ನು ಸೇರಿಕೊಂಡ. ಹತ್ತು ಜನ ಕಲಾವಿದರು ಸೇರಿ 57 ಕಾರ್ಟೂನುಗಳನ್ನು ತಯಾರಿಸಿದರು. ಇವುಗಳಿಗೆ ಅಂಥ ಪ್ರೋತ್ಸಾಹವೇನೂ ದೊರೆಯದೆ ಮತ್ತೆ ಆರ್ಥಿಕ ಹಿಂಜರಿಕೆಯುಂಟಾಯಿತು. ಕಲಾವಿದರಲ್ಲಿ ಒಬ್ಬಳಾಗಿದ್ದ ಲಿಲಿಯನ್ ಬಾಂಡ್ಸಳಿಗೆ ವಾರದ ಸಂಬಳ ಕೊಡಲೂ ಹಣ ಇಲ್ಲವಾಯಿತು. ಆದರೂ ಇಬ್ಬರ ಸಲಿಗೆ ಪ್ರೇಮವಾಗಿ ಪರಿಣಮಿಸಿತಾಗಿ ಡಿಸ್ನಿ ಆಕೆಯನ್ನು ವಿವಾಹವಾದ.

ಆಸ್ವಾಲ್ಡ್ ದಿ ಲಕಿ ರ್ಯಾಬಿಟ್ ಚಿತ್ರಮಾಲೆಯನ್ನು ಕಷ್ಟಪಟ್ಟು ಸಿದ್ಧಗೊಳಿಸಲಾಯಿತು. 1928ರಲ್ಲಿ ಆ ಮಾಲೆಯ ಒಂದೊಂದು ಚಿತ್ರಕ್ಕೂ 2,500 ಡಾಲರು ಹಣ ದೊರೆಯುತ್ತಿತ್ತು. ಈ ಚಿತ್ರಮಾಲೆ ಸಿದ್ಧಪಡಿಸುವಲ್ಲಿ ಡಿಸ್ನಿ ಹೊಸ ಹೊಸ ಪ್ರಯೋಗ ಮಾಡಲಾರಂಭಿಸಿದ. ಇಂಥ ನಷ್ಟದ ಯೋಜನೆಗೆ ಹಂಚಿಕೆದಾರ ಮುಂಗಡ ಹಣ ಕೊಡಲು ನಿರಾಕರಿಸಿದ. ಚಿತ್ರಗಳನ್ನು ಬೇರೆ ಹಂಚಿಕೆದಾರರಿಗೆ ಕೊಡುವಂತೆಯೂ ಇರಲಿಲ್ಲ ಕಾರಣ ಇದರ ಎಲ್ಲ ಹಕ್ಕನ್ನೂ ಆತನಿಗೇ ಮಾರಲಾಗಿತ್ತು. 

ದಿಕ್ಕು ತೋಚದೆ ಹಿಂತಿರುಗುತ್ತ ಡಿಸ್ನಿ ರೈಲಿನಲ್ಲಿ ಕುಳಿತ ಹಾಗೆಯೆ ಹೊಸ ಕಾರ್ಟೂನೊಂದನ್ನು ಚಿತ್ರಿಸಲಾರಂಭಿಸಿದ. ಇವನ ಮಯಸ್ಸಿನ ಮೇಲೆ ಅಚ್ಚು ಒತ್ತಿದ ಮಾರ್ಟಿಮರ್ ಇಲಿ ಕಾರ್ಟೂನ್ ರೂಪ ತಳೆಯಲಾರಂಭಿಸಿತು. ಹಾಲಿವುಡ್ಡಿನಲ್ಲಿ ರೈಲು ಇಳಿಯುವ ಹೊತ್ತಿಗೆ ಇವನ ಕಲ್ಪನೆಯ ಮಾರ್ಟಿಮರ್ ರೇಖಾಚಿತ್ರದಲ್ಲಿ ಮೂಡಿಬಂದಿತ್ತು. ಪತ್ನಿಯ ಸಲಹೆಯಂತೆ ಆ ಇಲಿಗೆ ಮಿಕಿಮೌಸ್ ಎಂದು ನಾಮಕರಣ ಮಾಡಿದ. ಸ್ವಲ್ಪಕಾಲದಲ್ಲೇ ಮಿಕಿ ಇವನ ಅದೃಷ್ಟ ದೇವತೆಯಾಗಿ ಭಾಗ್ಯದ ಬಾಗಿಲು ತೆರೆಯಿತು.

ಪ್ಲೇನ್ ಕ್ರೇಜಿû, ಗಲ್ಲೋಪಿನ್ಸ್ ಗಾಕೊ, ಸ್ಟೀಮ್ ಬೋಟ್ ವಿಲ್ಲೀ ಕಾರ್ಟೂನ್‍ಗಳಲ್ಲಿ ನಾಯಕನಾಗಿ ತೆರೆಗೆ ಬಂದಿತು. 1927ರಲ್ಲಿ ಟಾಕಿ ಚಿತ್ರಗಳು ಬಂದು, ಮೂಕಿ ಚಿತ್ರಗಳಿಗೆ ಬೇಡಿಕೆ ತಗ್ಗಿತ್ತು. ಧ್ವನಿರಹಿತ ಮಿಕಿ ತೆರೆಗೆ ಬರಲಾಗಲಿಲ್ಲ. ಹಾಲಿವುಡ್ಡಿಗೆ ಹಿಂತಿರುಗಿದ ಡಿಸ್ನಿ ಕೂಡಲೆ ತನ್ನ ಮೂಕ ಚಿತ್ರಗಳಿಗೆ ಧ್ವನಿಕೊಡುವ ಪ್ರಯೋಗ ನಡೆಸಿದ. ಬೆರಳುಗಳಿಂದ ಮೂಗು ಮುಚ್ಚಿಕೊಂಡು ಡಿಸ್ನಿ ತಾನೇ ಮಿಕಿಗಾಗಿ ಮಾತಾಡಿದ. ಮುಂದೆ 18ವರ್ಷಗಳ ಕಾಲ ಈ ಸಂಭಾಷಣೆಯನ್ನು ಡಿಸ್ನಿ ಮುಂದುವರಿಸಿಕೊಂಡು ಬಂದ. ಡಿಸ್ನಿಯ ಧ್ವನಿ ಪಡೆದ ಮಿಕಿಯನ್ನು ವಿಶ್ವವೇ ಸ್ವಾಗತಿಸಿತು. ಇಟಲಿಯಲ್ಲಿ ಟಾಪೋಲಿನೊ ಎಂದೂ ಜಪಾನಿನಲ್ಲಿ ಮಿಕಿ ಕುಚಿ ಎಂದೂ ಮಿಕಿ ಮೌಸ್ ಪ್ರಖ್ಯಾತವಾಯಿತು. ಮಿಕಿಯನ್ನು ಮೆಚ್ಚಿದ ಚಿತ್ರಪ್ರೇಮಿಗಳು ವಾರಕ್ಕೆ 7,000 ಪತ್ರಗಳನ್ನು ಬರೆಯುತ್ತಿದ್ದರಂತೆ.

ಮಿಕಿ ಬೊಗಸೆಗಟ್ಟಲೆ ಹಣ ತಂದರೂ ಡಿಸ್ನಿಯ ಆರ್ಥಿಕ ಸ್ಥಿತಿ ಸುಧಾರಿಸಲಿಲ್ಲ. ಅತ್ಯಂತ ಯಶಸ್ವಿ ವಾಣಿಜ್ಯೋದ್ಯಮಿ ಕೇ ಕಾಮೆನ್ನನ ಸಂಬಂಧ 1832ರಲ್ಲಿ ಡಿಸ್ನಿಗೆ ದೊರೆಯಿತು. ಕುಸಿಯುತ್ತಿದ್ದ ಮಿಕಿಯನ್ನು ಪ್ರಸಿದ್ಧಿಗೆ ತರಲು ಕೇ ನೂತನ ವಿಧಾನ ಅನುಸರಿಸಿದ. ಸುಮಾರು 5,000 ವಿವಿಧ ಸಾಮಗ್ರಿಗಳ ಮೇಲೆ, ತಮಾಷೆ ಪುಸ್ತಕಗಳ ಮೇಲೆ, ಗಡಿಯಾರ ಮತ್ತು ಟಿ ಷರ್ಟುಗಳ ಮೇಲೆ ಮಿಕಿಯ ಚಿತ್ರ ಮೂಡಿಬಂತು. ಮಿಕಿಯಿಂದಾಗಿ ವಸ್ತುಗಳ ಮಾರಾಟವೂ ಹೆಚ್ಚಿತು. ಮಕ್ಕಳ ರೈಲು ತಯಾರಿಸುತ್ತಿದ್ದ ಸಂಸ್ಥೆಯೊಂದು ಮಿಕಿ ನಡೆಸುತ್ತಿರುವ ರೈಲು ಎಂಜಿನ್ ಒಂದನ್ನು ತಯಾರಿಸಿ, 1933ರ ಕ್ರಿಸ್‍ಮಸ್ ಸಂದರ್ಭದಲ್ಲಿ 2,50,000 ಆಟದ ರೈಲುಗಳನ್ನು ಮಾರಾಟಮಾಡಿತು. ಇದರಿಂದ ಆ ಸಂಸ್ಥೆಯೂ ಉಳಿಯಿತು. ಮಿಕಿಗೂ ಅಭೂತಪೂರ್ವ ಪ್ರಚಾರ ದೊರೆಯಿತು.
ಮಿಕಿಯ ಅನಂತರ ಪ್ಲೂಟೊ ಎಂಬ ಕಾರ್ಟೂನ್ ನಾಯಿ ಹುಟ್ಟಿಬಂದು ಸುಮಾರು 48 ಚಿತ್ರಗಳಲ್ಲಿ ಕಾಣಿಸಿಕೊಂಡಿತು. ತರುವಾಯ ಬಂದ ಗೂಫಿ, ಹಾರ್ಸ್ ಕಾಲರ್ ಮತ್ತು ಕ್ಲಾರಬೆಲ್ ಕೌ ಮುಂತಾದ ಪ್ರಾಣಿ ಕಾರ್ಟೂನುಗಳು - ಇವೆಲ್ಲ ಡಿಸ್ನಿಯ ಬಾಲ್ಯದ ಸಂಗಾತಿಗಳೇ.

ಮತ್ತೊಂದು ಯಶಸ್ವಿ ಪ್ರಾಣಿ ಡೊನಾಲ್ಡ್ ಡಕ್ 1934ರಲ್ಲಿ ಸೃಷ್ಟಿಯಾಯಿತು. ಡಿಸ್ನಿಯ 126 ಚಿತ್ರಗಳಲ್ಲಿ ಇದು ಕಥಾನಾಯಕ. ಮಿಕಿಯ ಯಶಸ್ಸನ್ನೂ ಇದು ಮಂಕುಗೊಳಿಸಿತು.

1931ರಿಂದಲೂ ತನ್ನ ಕಲ್ಪನೆಯ ಯಕ್ಷಿಣಿ ಲೋಕಕ್ಕೆ ಬಣ್ಣಕಟ್ಟಲು ಡಿಸ್ನಿ ಪ್ರಯೋಗ ನಡೆಸುತ್ತಿದ್ದ. ಇದು ಸಿದ್ಧಿಸಿ ತ್ರಿ ಲಿಟ್ಲ್ ಪಿಗ್ಸ್ ತೆರೆಗೆ ಬಂದಿತು. ಇದನ್ನನುಸರಿಸಿ ಹೂ ಈಸ್ ಅಫ್ರೇಡ್ ಆಫ್ ದಿ ಬ್ಯಾಡ್ ವುಲ್ಫ್ ? ತೆರೆ ಕಂಡು ಡಿಸ್ನಿಯ ಗಳಿಕೆ ವೃದ್ಧಿಸಿತು. ಮಿಲಿಯನ್ ಮಿಲಿಯನ್ ಡಾಲರ್ ಸಂಪಾದಿಸುತ್ತಿದ್ದರೂ ಡಿಸ್ನಿ ಹಾಲಿವುಡ್ ರಾಜನಂತೆ ವರ್ತಿಸದೆ, ಸಾಮಾನ್ಯ ಕೆಲಸಗಾರನಂತೆ ಜೀವಿಸುತ್ತಿದ್ದ.

7 ನಿಮಿಷ ಕಾಲದ ಕಾರ್ಟೂನುಗಳು ಚೆನ್ನಾಗಿ ಹಣಗಳಿಸುತ್ತಿದ್ದರೂ ಪೂರ್ಣಕಾಲದ ಕಥಾವಸ್ತುವನ್ನುಳ್ಳ ಕಾರ್ಟೂನ್ ತಯಾರಿಸಬೇಕೆಂದು ಡಿಸ್ನಿಯ ಬಹುಕಾಲದ ಬಯಕೆಯಾಗಿತ್ತು. ಆದರೆ ಅದರ ಅಪಾರ ವೆಚ್ಚವನ್ನು ಭರಿಸುವ ಶಕ್ತಿ ಅವನಿಗಿರಲಿಲ್ಲ. ಬ್ಯಾಂಕ್ ಆಫ್ ಅಮೆರಿಕದ ಸುಮಾರು 6,00,000 ಡಾಲರು ಸಾಲ ಪಡೆದು, ಸಹಸ್ರಾರು ಜನ ಕಲಾವಿದರನ್ನು ನೇಮಿಸಿಕೊಂಡು ವರ್ಷ ವರ್ಷಗಳ ಕಾಲ ದುಡಿದು ಸ್ನೋ ಹ್ವೈಟ್ ಎಂಬ ಪೂರ್ಣಕಾಲದ ಪೂರ್ಣ ವರ್ಣದ ಕಾರ್ಟೂನ್ ಚಿತ್ರವನ್ನು ಪ್ರದರ್ಶನಕ್ಕೆ ತರಲಾಯಿತು. ಈ ಚಿತ್ರ ಅತ್ಯಂತ ಯಶಸ್ವಿಯಾಗಿ ಡಿಸ್ನಿಗೆ ನಿವ್ವಳ 27 ಮಿಲಿಯನ್ ಡಾಲರ್ ಲಾಭಗಳಿಸಿಕೊಟ್ಟಿತು. ಇದಕ್ಕೆ ಅಕಾಡೆಮಿ ಪ್ರಶಸ್ತಿಯೂ ಆಸ್ಕರ್ ಪ್ರಶಸ್ತಿಯೂ ದಕ್ಕಿತು.

ಕಾರ್ಲೊ ಕಲಾಡಿಯ ಪಿನೋಕಿಯೊ, ಫೆಲಿಕ್ಸ್ ಸಾಲ್ಟನ್ನನ ಬ್ಯಾಂಬಿ ಕಥಾವಸ್ತುಗಳನ್ನು ಆಯ್ದುಕೊಂಡು ಡಿಸ್ನಿ ಮತ್ತೆರಡು ಪೂರ್ಣಕಾಲದ ಕಾರ್ಟೂನ್ ತಯಾರಿಕೆಯಲ್ಲಿ ತೊಡಗಿದ. ಪಿನೋಕಿಯೊ ಒಂದಕ್ಕೆ 2.7 ಮಿಲಿಯನ್ ಡಾಲರ್ ಖರ್ಚಾಯಿತು ಎನ್ನಲಾಗಿದೆ.

ಬ್ಯಾಂಬಿ ಚಿತ್ರಣ ನಡೆಯುತ್ತಿದ್ದಾಗ 20.5 ಹೆಕ್ಟೇರ್ ಜಮೀನಿನಲ್ಲಿ ಅಲ್ಲಿನ ನೈಜವಾತಾವರಣವನ್ನು ರೂಢಿಸಿಕೊಂಡು ಹೊಸ ಸ್ಟುಡಿಯೋ ಉದಿಸಿತು. ಬ್ಯಾಂಬಿ ಚಿತ್ರಕ್ಕೆ ಮುಂಚೆ ಶಾಸ್ತ್ರೀಯ ಸಂಗೀತವನ್ನು ಆಧರಿಸಿಕೊಂಡ ಕಾರ್ಟೂನ್ ಫ್ಯಾಂಟಾಸಿಯಾ ಹೊರಬಂದಿತಾದರೂ ಎರಡನೆಯ ಮಹಾಯುದ್ಧದ ಕಾರಣದಿಂದಾಗಿ ಚಿತ್ರವ್ಯಾಪಾರ ಕುಸಿದು ಡಿಸ್ನಿಗೆ ಒಂದು ಮಿಲಿಯನ್ ಡಾಲರ್ ನಷ್ಟವಾಯಿತು. ದಿನದಿನಕ್ಕೂ ಹೆಚ್ಚುತ್ತಿದ್ದ ಖರ್ಚಿನಿಂದಾಗಿ 4.5 ಮಿಲಿಯನ್ ಡಾಲರ್ ಸಾಲವಾಯಿತು. ಈ ವಿಷಯವನ್ನು ಸೋದರ ರಾಯ್ ತಿಳಿಸಿದಾಗ ಸಾವಿರ ಡಾಲರ್ ಸಾಲ ದೊರೆಯದಿದ್ದ ಕಾಲವನ್ನು ಸ್ಮರಿಸಿಕೊ ಎಂದು ಹೇಳಿ ನಕ್ಕುಬಿಟ್ಟನಂತೆ.
ಬ್ಯಾಂಬಿ ಚಿತ್ರದ ವೈಶಿಷ್ಟ್ಯವೆಂದರೆ ಅದುವರೆಗೂ ಕ್ಯಾಮರದ ಕಣ್ಣು ಪ್ರವೇಶಿಸದಿದ್ದ ಗೊಂಡಾರಣ್ಯವನ್ನು ಹೊಕ್ಕು ಅಲ್ಲಿನ ಸುಂದರ ದೃಶ್ಯಗಳನ್ನು ಸೆರೆಹಿಡಿದು ಬ್ಯಾಂಬಿಗೆ ನೈಜ ಹಿನ್ನೆಲೆ ದೃಶ್ಯವನ್ನು ಒದಗಿಸಿಕೊಟ್ಟದ್ದು.

ಪ್ರಿಬಲೋಫ್ ದ್ವೀಪಗಳಲ್ಲಿದ್ದ 15 ಲಕ್ಷ ಸೀಲ್ ಪ್ರಾಣಿಗಳನ್ನು ಅವುಗಳ ಸಹಜ ಜೀವನವನ್ನು ಚಿತ್ರೀಕರಿಸಿರುವ 31 ನಿಮಿಷ ಕಾಲದ ನೈಜ ಪ್ರಾಣಿ ಚಿತ್ರ ಸೀಲ್ ಐಲೆಂಡ್ ತೆರೆಗೆ ಬಂದಿತು. ಮೊದ ಮೊದಲು ಇದಕ್ಕೆ ಪ್ರೋತ್ಸಾಹ ದೊರೆಯದಾದರೂ ಈ ಚಿತ್ರ ಆಸ್ಕರ್ ಪ್ರಶಸ್ತಿ ಪಡೆದ ಮೇಲೆ ತುಂಬ ಯಶಸ್ವಿ ಚಿತ್ರವಾಯಿತು. ಈ ಮಾಲಿಕೆಯಲ್ಲಿ ದಿ ಆಫ್ರಿಕನ್ ಲಯನ್ ಹಾಗೂ ದಿ ವ್ಯಾನಿಷಿಂಗ್ ಪ್ರೈರಿ ಹೊರಬಂದವು. ಇವು ಕಾರ್ಟೂನ್ ಚಿತ್ರಗಳಲ್ಲ. ಪ್ರಕೃತಿಯಿಂದ ನೇರವಾಗಿ ತೆಗೆದುಕೊಂಡ ಸಾಕ್ಷ್ಯ ಚಿತ್ರಗಳಿವು.

ಡಿಸ್ನಿ ತಯಾರಿಸಿದ 20 ಚಿತ್ರಗಳು ಆಸ್ಕರ್ ಪ್ರಶಸ್ತಿ ಗಳಿಸಿಕೊಂಡು ವಿಶ್ವದಾಖಲೆ ಸ್ಥಾಪಿಸಿದವು.
ಡಿಸ್ನಿ ಮಕ್ಕಳಿಗಾಗಿ ತನ್ನ ಕಾರ್ಟೂನ್ ಚಿತ್ರಗಳ ಯಕ್ಷಿಣಿ ಲೋಕಕ್ಕೆ ಸರಿ ಹೊಂದುವಂಥ ವಿನೋದ ಉದ್ಯಾನವೊಂದನ್ನು ಕಟ್ಟಲು ನಿರ್ಧರಿಸಿದ. ಲಾಸ್ ಆಂಜಲಸ್‍ಗೆ 40 ಕಿ.ಮೀ. ದೂರದ 99 ಹೆಕ್ಟೇರು ಜಾಗದಲ್ಲಿ ಈ ಯಕ್ಷಿಣಿ ಲೋಕದ ಸೃಷ್ಟಿ 1952ರಲ್ಲಿ ಆರಂಭವಾಗಿ 17 ಮಿಲಿಯನ್ ಡಾಲರುಗಳ ವೆಚ್ಚದಿಂದ ನಿರ್ಮಾಣಗೊಂಡು 17ನೆಯ ಜುಲೈ 1955ರಲ್ಲಿ ಬಳಕೆಗೆ ಬಂತು. ಲಕ್ಷ ಲಕ್ಷ ಜನ ನಿರೀಕ್ಷಿಸುತ್ತಿದ್ದ ಯಕ್ಷಿಣಿ ಲೋಕ ಆರಂಭವಾಗಿ ಅಬಾಲ ವೃದ್ಧರ ಮನ ತಣಿಸಿತು. ಆರಂಭೋತ್ಸವದ ದಿನ ಪತ್ರಿಕಾ ವರದಿಗಾರನೊಬ್ಬ ಈ ಕಲ್ಪನಾಲೋಕ ಮುಗಿಯುವುದೆಂದು-ಎಂದು ಡಿಸ್ನಿಯನ್ನು ಕೇಳಿದಾಗ ಎಂದಿಗೂ ಇಲ್ಲ ಪ್ರಪಂಚದಲ್ಲಿ ಕಲ್ಪನೆ ಜೀವಂತವಿರುವವರೆಗೂ ಇದು ಸೃಷ್ಟಿಯಾಗುತ್ತಲೇ ಇರುತ್ತದೆ-ಎಂದು ತಿಳಿಸಿದನಂತೆ. ಅಂತೆಯೇ ಇಂದಿಗೂ ಈ ಡಿಸ್ನಿ ಪ್ರಪಂಚ ವೃದ್ಧಿಸುತ್ತಲೇ ಇದೆ.

ವಯಸ್ಸು ಮಾಗಿದ ಡಿಸ್ನಿ ವಿಶ್ರಾಂತನಾಗಬೇಕೆಂಬುದು ಆತನ ಸತಿಯ ಬಯಕೆ. ಹಣದ ಕೊರತೆಗೆ ಅವಕಾಶವೇ ಇರಲಿಲ್ಲ. ಅವನ ಕಾರ್ಟೂನುಗಳು, ಕಥಾಚಿತ್ರಗಳಾದ 20,000 ಲೀಗ್ಸ್ ಅಂಡ್ ದಿ. ಸಿ, 101 ಡಾಲ್ಮೇಷನ್ಸ್, ಮೇರಿ ಪಾಪಿನ್ಸ್ ಹಾಗೂ ಡಿಸ್ನಿ ಲ್ಯಾಂಡ್ ಅವನ ಭಾಗ್ಯದ ನಿಧಿಯಾಗಿದ್ದುವು. ಡಿಸ್ನಿಯ ವೈಯಕ್ತಿಕ ಆಸ್ತಿಯ ಬೆಲೆಯೇ 20 ಲಕ್ಷ ಮಿನಿಯನ್ ಡಾಲರ್ ಆಗಿತ್ತು. ಇದರಲ್ಲಿ ಅರ್ಧವನ್ನು ಕ್ಯಾಲಿಪೋರ್ನಿಯ ಕಲಾಶಾಲೆಗೆ ದಾನಮಾಡಿದ್ದ.

ಡಿಸ್ನಿ ತನ್ನ ಜೀವನದ ಅಂತಿಮ ವರ್ಷಗಳಲ್ಲಿ ಮತ್ತೊಂದು ನೂತನ ಸೃಷ್ಟಿಯಲ್ಲಿ ತೊಡಗಿದ. ನ್ಯೂಯಾರ್ಕ್, ವಾಷಿಂಗ್‍ಟನ್ ಮುಂತಾದ ಬೃಹತ್ ನಗರಗಳ ಯಾಂತ್ರಿಕ ಕಲ್ಮಷ ತುಂಬಿದ ಜೀವನಕ್ಕೆ ಬೇಸತ್ತವರಿಗಾಗಿ ಸರಳ ಶಾಂತ ನಗರ ಒಂದನ್ನು ಸೃಷ್ಟಿಸುವ ಕಲ್ಪನೆಯಲ್ಲಿ ತೊಡಗಿದ. ಫ್ಲಾರಿಡದ ಆಲ್ರ್ಯಾಂಡೊ ಸಮೀಪದಲ್ಲಿ 11,000 ಹೆಕ್ಟೇರ್ ಜಮೀನು ಕೊಂಡುಕೊಂಡು ತನ್ನ "ನಾಳಿನ ಪ್ರಪಂಚ"ದ ನಿರ್ಮಾಣಕ್ಕೆ ಯೋಜನೆ ಹಾಕಿದ. ಆ ನಗರದ ನಿರ್ಮಾಣ ಇಂದೂ ನಡೆಯುತ್ತಿದೆ. ಫ್ಲಾರಿಡ ಸರ್ಕಾರ ಡಿಸ್ನಿಲ್ಯಾಂಡ್‍ಗಳನ್ನು ಒಂದು ಪ್ರತ್ಯೇಕ ರಾಜ್ಯವೆಂದು ಪರಿಗಣಿಸಿ ಸ್ವಾಯತ್ತತೆ ನೀಡಿದೆ.

ಡಿಸ್ನಿಯ ಕ್ಯಾಲಿಪೋರ್ನಿಯ ಸ್ಟುಡಿಯೋದಿಂದ ಸಂಕ್ಷಿಪ್ತಾವಧಿಯ 534 ಕಾರ್ಟೂನ್ ಚಿತ್ರಗಳೂ 44 ಸಜೀವ ಚಿತ್ರಗಳೂ 47 ವ್ಯಾಪಾರೀ ಹಾಗೂ ವ್ಯಾಸಂಗೋಪಯೋಗಿ ಚಿತ್ರಗಳೂ 83 ಪೂರ್ಣಾವಧಿ ಕಥಾಚಿತ್ರಗಳೂ ಹೊರಬಂದುವು. 1965ರ ಒಂದು ವರ್ಷದಲ್ಲೆ 6 ಲಕ್ಷ ಜನ ಒಂದೇ ದಿನ ಡಿಸ್ನಿಲ್ಯಾಂಡಿಗೆ ಭೇಟಿ ನೀಡಿದ್ದರು. ನ್ಯೂಯಾರ್ಕಿನ ವರ್ಲ್ಡ್‍ಫೇರ್‍ನಲ್ಲಿ 21 ದಶಲಕ್ಷ ಜನ ಆ ನೆಲವನ್ನು ಸಂದರ್ಶಿಸಿದ ದಾಖಲೆಗಳಿವೆ. ಪ್ರತಿವರ್ಷ 180 ದಶಲಕ್ಷ ಜನ ಹಣ ಕೊಟ್ಟು ಡಿಸ್ನಿ ಚಿತ್ರಗಳನ್ನು ನೋಡುತ್ತಾರೆ. 100 ದಶಲಕ್ಷ ಜನ ಡಿಸ್ನಿ ಕಥೆ ಪುಸ್ತಕಗಳನ್ನು ಓದುತ್ತಾರೆ. ಪ್ರತಿವಾರ ಡಿಸ್ನಿ ಕಾಮಿಕ್ ಪ್ರದರ್ಶನಗಳನ್ನು 250 ದಶಲಕ್ಷ ಜನ ನೋಡುತ್ತಾರೆ. 70 ದೇಶಗಳಲ್ಲಿ ಡಿಸ್ನಿ ಚಿತ್ರಗಳನ್ನು ಟೆಲಿವಿಷನ್‍ಗಳಲ್ಲಿ ನೊಡುತ್ತಾರೆ. ಒಟ್ಟಿನಲ್ಲಿ ಈತನ ಪ್ರೇಕ್ಷಕರ ಸಂಖ್ಯೆ ಅಗಣಿತ. ಯಕ್ಷಿಣಿ ಹಾಗೂ ಕಾಲ್ಪನಿಕ ಕಥೆ ಹೇಳುವಲ್ಲಿ ಡಿಸ್ನಿ ಅದ್ವಿತೀಯ, ಕಾಲ್ಪನಿಕ ಪಾತ್ರಸೃಷ್ಟಿಯ ಬ್ರಹ್ಮ. ವಿಶ್ವಮಾನ ಹೃದಯವನ್ನು ಸೆರೆಹಿಡಿಯುವಲ್ಲಿ ಇವನಿಗಿಂತ ಮಿಗಿಲಾದವರು ಬೇರೊಬ್ಬರಿಲ್ಲವೆಂದೇ ಹೇಳಬೇಕು.

ಹೊಸ ಹೊಸ ಕಲ್ಪನೆಗಳನ್ನು ಕಾಣಲಸಮರ್ಥನಾದಾಗ, ದುಡಿಯಲು ಶಕ್ತಿಯಿಲ್ಲವೆಂದು ತಿಳಿದುಬಂದಾಗ ನಾನು ಬದುಕಬಯಸುವುದಿಲ್ಲವೆಂದು ತನ್ನ ಹೆಂಡತಿಗೆ ಡಿಸ್ನಿ ಹೇಳುತ್ತಿದ್ದ. ಅಂತೆಯೇ ಅವಿಶ್ರಾಂತವಾಗಿ ಒಂದೇ ಸಮನೆ ಚಲಿಸಿದ ಅವನ ಹೃದಯ 15ನೆಯ ಡಿಸೆಂಬರ್ 1966ರಂದು ಚಲನೆ ನಿಲ್ಲಿಸಿತು. ಕಾರ್ಟೂನ್ ಪ್ರಪಂಚವನ್ನೇ ಸೃಷ್ಟಿಸಿದ ಡಿಸ್ನಿ ತಾನೂ ಒಬ್ಬ ಕಾರ್ಟೂನ್ ಕಥಾ ನಾಯಕನಂತೆ ಜೀವನದ ತೆರೆಯಿಂದ ನಿರ್ಗಮಿಸಿದ.
(ಜೆ.ಎಸ್.ವಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ